ಈ ವಾರ ತೆರೆಗೆ - `ಶಿಕಾರಿ` ಹಾಗೂ `ಗೋವಿಂದಾಯ ನಮಃ`
Posted date: 28 Wed, Mar 2012 ? 09:28:14 AM

ಹೆಸರಾಂತ ನಿರ್ಮಾಪಕ ಕೆ.ಮಂಜು ಸಂತೋಷದಲ್ಲಿ ತೇಲಿ ಹೋಗಿದ್ದಾರೆ. ಅದಕ್ಕೆ ಕಾರಣ ಮಂಜು ಫಿಲಂಸ್ ಅವರ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಪ್ರಥಮ ಕನ್ನಡ ಚಿತ್ರ ’ಶಿಕಾರಿ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು.

ದಕ್ಷಿಣ ಭಾರತದಲ್ಲಿ ೩೭೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಹಲವಾರು ರಾಷ್ಟ್ರ ಪ್ರಶಸ್ತಿ, ಅಂತರಾಷ್ಟ್ರ ಮನ್ನಣೆ ಪಡೆದಿರುವ ಅಜಾನುಬಾಹು ಮಮ್ಮುಟ್ಟಿ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಅಭಿನಯಿಸಿ ತಾವೇ ಸ್ವತಹ ಕನ್ನಡ ಭಾಷೆಯನ್ನು ತಮ್ಮ ಪಾತ್ರಕ್ಕೆ ಆಡಿದ್ದಾರೆ.

ಏನಿದು ಶಿಕಾರಿ? ನಿರ್ದೇಶಕ ಅಭಯಸಿಂಹ ಅವರ ದ್ವಿತೀಯ ಚಿತ್ರ ’ಶಿಕಾರಿ’ ಸ್ವಾತಂತ್ರಪೂರ್ವ ಹಾಗೂ ಇಂದಿನ ಸಾಫ್ಟವೇರ್ ಯುಗದ ನಾಯಕನ ಕುರಿತು ಚಿತ್ರಿಸಿರುವ ಒಂದು ಅಪರೂಪದ ಅನುಭವ ನೋಡುಗರಿಗೆ ನೀಡಲಿದೆ. ಸಾಫ್ಟವೇರ್ ಮಮ್ಮುಟ್ಟಿ ಆಕಸ್ಮಿಕವಾಗಿ ಒಂದು ಪುಸ್ತಕವನ್ನು ತಿರಿವಿ ಹಾಕುತ್ತಿರುವಾಗ ಅಲ್ಲಿ ಸಂಭವಿಸುವ ಘಟನೆಗಳಿಗೆ ತಾನೇ ಸಾಕ್ಷಿಯಾಗುತ್ತಾ ಹೋಗುತ್ತಾನೆ. ಆಗಲೇ ಅವನಿಗೊಂದು ಹುಡುಕಾಟವೂ ಪ್ರಾರಂಭವಾಗುತ್ತದೆ ಮತ್ತು ಸ್ವಾತಂತ್ರ ಸಂಗ್ರಾಮವು ತೆರೆದುಕೊಳ್ಳುತ್ತದೆ.

ಮಮ್ಮುಟ್ಟಿ ಅವರಿಗೆ ನಾಯಕಿಯಾಗಿ ಪೂನಂ ಬಾಜ್ವ ಅಭಿನಯಿಸಿದ್ದಾರೆ. ಆದಿತ್ಯ, ಮೋಹನ್, ನೀನಾಸಂ ಅಶ್ವಥ್, ಶರತ್ ಲೋಹಿತಾಶ್ವ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿದ್ದಾರೆ. ಡಾ.ವಿಕ್ರಂ ಶ್ರೀವಾಸ್ತವ್ ಅವರ ಛಾಯಾಗ್ರಹಣ, ವಿ. ಹರಿಕೃಷ್ಣ ಅವರ ಸಂಗೀತ, ಎಸ್. ಮನೋಹರ್ ಅವರ ಸಂಕಲನ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಅವರ ಸಾಹಿತ್ಯ, ಮದನ್ ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.

’ಗೋವಿಂದಾಯಾ ನಮಃ’ ನಿಮ್ಮ ಮುಂದೆ

ಗೋವಿಂದ ಗೋವಿಂದ ಎಂದು ಜಗತ್ರಕ್ಷಕನನ್ನು ಪರಿಪರಿಯಾಗಿ ಪ್ರಾರ್ಥಿಸುವುದು ಸರ್ವೇ ಸಾಮಾನ್ಯ. ಆದರೆ ಈ ’ಗೋವಿಂದಾಯಾ ನಮಃ’ ಚಿತ್ರದಲ್ಲಿ ನಾಯಕ ಪ್ರೀತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಗೋವಿಂದ ಗೋವಿಂದ ಎಂದು ನಾಲ್ಕು ಹುಡುಗಿಯರ ಬೆನ್ನ ಹಿಂದೆ ಬೀಳುವ ನಾಯಕ ನಟ ಕೋಮಲ್ ಕುಮಾರ್ ಕೊನೆಗೂ ಪ್ರೀತಿಯನ್ನು ಪ್ರೀತಿಯಿಂದಲೇ ಗೆದ್ದು ಬಿಡುವುದೇ ಈ ಹಾಸ್ಯಮಯ ಕೌಟುಂಬಿಕ ಚಿತ್ರ ಶ್ರೀ ಸುರೇಶ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಪಕ ಕೆ.ಎ. ಸುರೇಶ್ ಈ ವಾರ ತೆರೆಗೆ ಅರ್ಪಿಸುತ್ತಿದ್ದಾರೆ.

ಹಾಡುಗಳ ಪೈಕಿ  ಪ್ಯಾರ್‌ಗೆ ಆಗ್ಬುಟೈತೆ................. ಕ್ರಾಂತಿಯನ್ನೇ ಸೃಷ್ಟಿಸಿದ್ದು ರಜತ ಪರದೆಯ ಮೇಲೆ ಇನ್ನಷ್ಟು ಪ್ರಭಾವವನ್ನು ಬೀರಲಿದೆ.

ಸಾಫ್ಟವೇರ್ ಉದ್ಯೋಗಿಯಾಗಿದ್ದುಕೊಂಡು ಹಾಸ್ಯ ಮನರಂಜನೆ ಸಿನಿಮಾಕ್ಕೆ ಪಾದಾರ್ಪಣೆ ಮಾಡುತ್ತಿರುವ ಪವನ್ ವಾಡಿಯಾರ್ ತಮ್ಮ ಮೊದಲ ಪ್ರಯತ್ನದಲ್ಲಿ ಕತೆ, ಚಿತ್ರಕತೆ ಸಂಭಾಷಣೆ, ೨ ಹಾಡುಗಳು ಹಾಗೂ ನಿರ್ದೇಶನವನ್ನು ಒದಗಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೃತ್ತಿ ಜೀವನದಿಂದ ರಜೆ ಪಡೆದು ನಿರ್ದೇಶನಕ್ಕೆ ದುಮುಕಿದ್ದಾರೆ. ನಿರ್ಮಾಪಕ ಸುರೇಶ್ ಅವರ ಪ್ರಕಾರ ಈ ಚಿತ್ರವು ಕಾಮಿಡಿ, ಪ್ರೀತಿ, ಸಾಹಸ ಎಲ್ಲವೂ ಒಳಗೊಂಡಿದ್ದು ಸಿನಿಮಾ ಪ್ರೇಕ್ಷಕನಿಗೆ ಉತ್ತಮ ಚಿತ್ರವಾಗಲಿದೆ.

ಈ ಹಾಸ್ಯಮಯ ಚಿತ್ರಕ್ಕೆ ಕೋಮಲ್ ಕುಮಾರ್ ಜೊತೆಗೆ ನಾಯಕಿಯರಾಗಿ ಮಧುಲಿಕಾ, ರೇಖಾ, ಪಾರುಲ್ ಯಾಸ್ ಹಾಗೂ ವಿದೇಶಿ ಬೆಡಗಿ ಆನ ಬಾರ್ಬರ ಅಭಿನಯಿಸಿದ್ದಾರೆ. ವಿದೇಶಿ ಬೆಡಗಿ ಆನ ಅವರಿಂದಲೇ ಕನ್ನಡದ ಅಣಿಮುತ್ತುಗಳನ್ನು ಹೇಳಿಸಿದ್ದಾರೆ. ಗುರುಕಿರಣ್ ಅವರ ಸಂಗೀತವನ್ನು ಹೊಂದಿರುವ ಈ ಚಿತ್ರಕ್ಕೆ  ಸುರೇಶ್ ಬಾಬು ಅವರ ಛಾಯಾಗ್ರಹಣ ಇದೆ.
 
ತಾರಾಗಣದಲ್ಲಿ ತಬಲಾ ನಾಣಿ, ಮುಖ್ಯಮಂತ್ರಿ ಚಂದ್ರು, ಕಿರ್ಲೋಸ್ಕರ್ ಸತ್ಯ, ಹರೀಶ್ ರಾಜ್, ವಿನಾಯಕ್ ಜೋಶಿ ಸಹ ಅಭಿನಯ ಮಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed